ಒತ್ತೆಕೋಲ: ಭೂತಾರಾಧನೆಯ ಭಾಗವಾಗಿ ಬರುವ ಒಂದು ವಿಶಿಷ್ಟ ಜನಪದ ಆಚರಣೆ; ವಿಷ್ಣು ದೈವಾರಾಧನೆ. ಕೇರಳ ಮತ್ತು   ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಹರಕೆಯ ರೂಪದಲ್ಲಿ ವಿಷ್ಣುವಿನ ಒತ್ತೆ ಕೋಲವನ್ನು ನಡೆಸುವ ಪದ್ಧತಿ ರೂಡಿsಯಲ್ಲಿದೆ. ಇದು ಕೇರಳ ಮೂಲದಿಂದ ಬಂದದ್ದು. ಇದರ ವೇಷ ಕಟ್ಟುವವರು ಕೂಡ ಮಲಯಾಳಿ ಗಳು. ಈ ಆಚರಣೆಯಲ್ಲಿ ಭೂತದ ಪಾತ್ರಿ ಉರಿಯುವ ಕೊಂಡ ಹಾಯುವನು.
ವಿಷ್ಣುವಿನ, ನರಸಿಂಹನ ಅವತಾರವನ್ನು ಸೂಚಿಸುವ, ತೆಂಗಿನ ಗರಿಗಳಿಂದ ತಯಾರಿಸಲ್ಪಟ್ಟ ಭೂತದ ವೇಷ ಭೂಷಣ ವಿಚಿತ್ರ ವಿನ್ಯಾಸಗಳಿಂದ ಕಂಗೊಳಿಸುತ್ತದೆ. ಒಂದು ಗಮನಾರ್ಹ ಸಂಗತಿ ಎಂದರೆ ಮಲವ ಜನಾಂಗದವರಿಗೆ ಇದು ಪರಂಪರಾಗತವಾಗಿ ಬಂದ ಕುಲಕಸುಬು. ಒತ್ತೆಕೋಲದ ಆಚರಣೆಯ ವಿದಿs ವಿಧಾನಗಳು ಹೀಗಿವೆ: ಸಾಮಾನ್ಯವಾಗಿ ಮುಸ್ಸಂಜೆಯಿಂದ ಮುಂಜಾನೆಯವರೆಗೆ ಕೋಲ ನಡೆಯುತ್ತದೆ. ಕಾರ್ಯಕ್ರಮ ಮೂರು ಘಟ್ಟಗಳಲ್ಲಿ ನಡೆಯುತ್ತದೆ. ಮಲೇರಿಗೆ ಅಗ್ನಿ ಸ್ಪರ್ಶ ನೀಡುವುದು, ಕುಳಿಚ್ಚಾಟ್, ಕೆಂಡದ ರಾಶಿಗೆ 
ಭೂತ ಬೀಳುವುದು - ಇವೇ ಆ ಮೂರು ಘಟ್ಟಗಳು. 

ಒತ್ತೆಕೋಲ ನಡೆಸುವ ದಿನ ನಿರ್ಧರಿತವಾದ ಮೇಲೆ ಹಲಸು ಅಥವಾ ಹಾಲು ಒಸರುವ ಮರದ ಬಳಿ ಹೋಗಿ ಪೂಜಿಸಿ ಒಂದು ಕೊಂಬೆಯನ್ನು ಕಡಿದುಕೊಂಡು ಬಂದು ಕೋಲ ನಡೆಸುವ ಸ್ಥಳದಲ್ಲಿ ಹಾಕುವರು. ಹೀಗೆ ಒಂದು ತಿಂಗಳ ಕಾಲ ಸೌದೆ ಶೇಖರಣೆಯಾಗಿ ಕೋಲದ ಆರಂಭದ ದಿನ ಈ ಸೌದೆಯನ್ನು ಚೌಕಾಕಾರವಾಗಿ ಅಳೆತ್ತರಕ್ಕೆ ಜೋಡಿಸುವರು. ಇದೇ ಮಲೇರಿ. ಇದರ ಎದುರಿಗೇ 16 ಮೀಗಳ ಅಂತರದಲ್ಲಿ ಪೂರ್ವಾಬಿsಮುಖವಾಗಿ ತೆಂಗಿನ ಗರಿಗಳಿಂದ ಮಂಟಪ ರೂಪಿಸಿ ಅಲ್ಲಿ ತೆಂಗಿನಕಾಯಿ, ಹೊಂಬಾಳೆಯನ್ನು ಸೇರಿಸಿ ನೇತು ಹಾಕುವರು. ಬೆಳ್ಚೆಪಾಡರು ವಿಷ್ಣುಮೂರ್ತಿ ದೇವಾಲಯದಿಂದ ಭಂಡಾರವನ್ನು ತಂದು ಮಂಟಪದಲ್ಲಿಡುವರು. ಹದಿನಾರು ಬಾಳೆಎಲೆಗಳನ್ನು ಹಾಕಿ ಪ್ರತಿಯೊಂದರಲ್ಲಿ ಎರಡೆರಡು ಬಾಳೆಹಣ್ಣು, ತೆಂಗಿನಕಾಯಿ, ಅಡಕೆ ಹಾಗೂ ಹೊಂಬಾಳೆಗಳನ್ನು ನೈವೇದ್ಯಕ್ಕಿಟ್ಟು ಪೂಜೆ 
ಮಾಡುವರು. ಅನಂತರ ಮಲೇರಿಗೆ ಬೆಂಕಿ ಕೊಡುವರು.

ಮಧ್ಯರಾತ್ರಿ ವೇಳೆ ಕುಳಿಚ್ಚಾಟ್ ಆರಂಭವಾಗುತ್ತದೆ. ಇಲ್ಲಿ ದೈವವನ್ನು ಕಟ್ಟುವವ ಮಲಯ ಜಾತಿಯ ಪಾತ್ರಿ. ಮಡಿಯುಟ್ಚು ಕೆಂಪು ವಸ್ತ್ರ ಅಂಗೈಯಲ್ಲಿ ಹಿಡಿದು ಮಲೇರಿಗೆ ಮೂರು ಬಾರಿ ಪ್ರದಕ್ಷಿಣೆ ಮಾಡುವನು. ಇವನ ವೇಷ ಭೂಷಣಗಳು ವಿಶೇಷತೆಯಿಂದ ಕೂಡಿರುತ್ತವೆ. 
ಬಳಿಕ ಈತ ಮಂಟಪದಲ್ಲಿ ನಿಲ್ಲುವನು. ಈತನ ಸಹಾಯಕರು ಚಂಡೆಯನ್ನು ಬಾರಿಸುವರು. ಒಡನೆ ಪಾತ್ರಿಗೆ ದೈವದ ಆವಾಹನೆಯಾಗುವುದು. ವಿಷ್ಣು ನರಸಿಂಹಾವತಾರ ತಾಳಿ ಹಿರಣ್ಯಕಶಿಪುವನ್ನು ವದಿsಸಿ ಪ್ರಹ್ಲಾದನನ್ನು ರಕ್ಷಿಸಿದ ಕಥೆಯನ್ನು ಇಬ್ಬರು ಮಲಯಾಳಂ 
ಭಾಷೆಯಲ್ಲಿ ಪಾಡ್ದನವನ್ನು ಹಾಡುವರು. ಆಗ ಪಾತ್ರಿ ಹಾಡಿಗೆ ತಕ್ಕಂತೆ ಭಾವಾಬಿsನಯ ನೀಡುವನು. ಇದೇ ಕುಳಿಚ್ಚಾಟ್.
ಈ ಕಾರ್ಯಕ್ರಮ ಮುಂಜಾನೆವರೆಗೂ ನಡೆಯುತ್ತದೆ. ಅನಂತರ ಪಾತ್ರಿ ಕುಳಿಚ್ಚಾಟ್ ವೇಷ ಕಳಚಿ ಬೇರೆ ವೇಷ ಹಾಕುವನು. ವಿಷ್ಣುಮೂರ್ತಿಯ ಕೊಂಡ ಹಾಯುವ ಮೊದಲಹಂತ ಆರಂಭವಾಗುವುದು. ಪಾತ್ರಿಯು ಮೈ ತುಂಬ ಬಾಳೆ ನಾರನ್ನು ಸುತ್ತಿ, ಸೊಂಟದ ಸುತ್ತ ತೆಂಗಿನಗರಿ ಬಿಗಿದು ಕೊಂಡ ಹಾಯಲು ಸಿದ್ಧನಾಗುವನು. ಇವನಿಗೂ ಮೊದಲು ಬೆಳ್ಚಪ್ಪಾಡರು ಕೆಂಡದ ರಾಶಿ ಮೇಲೆ ಮೂರು ಬಾರಿ ಓಡಾಡುವರು. ಅನಂತರ ವಿಷ್ಣುವೇಷದ ಪಾತ್ರಿ ಕೆಂಡದ ಮೇಲೆ ಪದೇ ಪದೇ ಬೀಳುವನು. ಈತ ಹೀಗೆ ಬೀಳುತ್ತಿದ್ದಂತೆ ಸಹಾಯಕರಿಬ್ಬರು ಸೊಂಟಕ್ಕೆ ಕಟ್ಟಿರುವ ತೆಂಗಿನ ಗರಿಗಳನ್ನು ಹಿಡಿದು ಎಳೆಯುವರು. ಈ ಕ್ರಿಯೆ ನಿರಂತರವಾಗಿ ಬೆಳಗಿನವರೆಗೂ ನಡೆಯುತ್ತದೆ. ಅನಂತರ ಒತ್ತೆಕೋಲಕ್ಕೆ ಹರಕೆಯಾಗಿ ತಂದ ಕೋಳಿಗಳನ್ನು ಬಲಿ ಕೊಡುವರು. ಈ ಸಂದರ್ಭದಲ್ಲಿ ಭಕ್ತಾದಿಗಳು ಪಾತ್ರಿಯೊಡನೆ ಭವಿಷ್ಯ ಅಥವಾ ಕಣಿ ಕೇಳುವುದೂ ಉಂಟು. ಅನಂತರ ವೇಷಧಾರಿ ಭೂತದ ಕಲ್ಲು ಇರುವಲ್ಲಿಗೆ ಹೋಗಿ ದೈವಕ್ಕೆ ಪ್ರಾರ್ಥನೆ ಸಲ್ಲಿಸುವಲ್ಲಿಗೆ ಕೋಲದ ಆಚರಣೆ  ಮುುಗಿಯುತ್ತದೆ. 				          (ಎಂ.ಆರ್ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ